ಫೂಕೋ, ಜೀನ್ ಬರ್ನಾರ್ ಲೇಯಾನ್
	1819-68. ಫ್ರಾನ್ಸಿನ ಭೌತವಿಜ್ಞಾನಿ. ಪ್ಯಾರಿಸಿನಲ್ಲಿ ಜನನ, (18-9-1919) ತಂದೆ ಪ್ಯಾರಿಸಿನ ಒಬ್ಬ ಶ್ರೀಮಂತ ಪ್ರಕಾಶಕ. ಫೂಕೋ 10 ವರ್ಷದ ಹುಡಗನಾಗಿದ್ದಾಗಲೇ ತಂದೆ ಸಾವಿಗೀಡಾದ. ಹೀಗಾಗಿ ತಾಯಿಯ ಆಶ್ರಯದಲ್ಲೇ ಬೆಳೆಯಬೇಕಾಯಿತು. ಚಿಕ್ಕಂದಿನಲ್ಲಿ ಬಹಳಷ್ಟು ಕಾಡುತ್ತಿದ್ದ ಅನಾರೋಗ್ಯದ ನಿಮಿತ್ತ ತರಗತಿಗಳಿಗೆ ಅನೇಕ ವೇಳೆ ತಪ್ಪಿಸಿಕೊಳ್ಳುತ್ತಿದ್ದ. ಆದರೂ ವಿಜ್ಞಾನದಲ್ಲಿ ಆಸಕ್ತಿಯನ್ನೂ ಅಭಿರುಚಿಯನ್ನೂ ಬೆಳೆಸಿಕೊಂಡು ಹಬೆಯಂತ್ರವೂ ಸೇರಿದ ಹಾಗೆ ಅನೇಕ ವೈಜ್ಞಾನಿಕ ಆಟಿಕೆಗಳನ್ನು ತಾನೇ ರೂಪಿಸಿಕೊಳ್ಳುತ್ತಿದ್ದ. ಆಗ ನೀಡಲಾಗುತ್ತಿದ್ದ ಸಾಂಪ್ರದಾಯಿಕ ಶಿಕ್ಷಣದ ಬಗ್ಗೆ ಈತನಿಗೆ ಇದ್ದ ಒಲವು ತೀರ ಕಡಿಮೆ. ತೋರ್ಕೆಗೆ ಮಂದಬುದ್ಧಿಯವನೆಂದೆನಿಸಿದರೂ ವಿಜ್ಞಾನ ವಿಷಯಗಳನ್ನು ಕುರಿತಂತೆ ಈತನಲ್ಲಿ ಅಮಿತಾಸಕ್ತಿ ಇತ್ತು. ಈತನ ಜಾಣ್ಮೆ, ಕೌಶಲ, ಚಾತುರ್ಯ ಗಮನಿಸಿದ ತಾಯಿ ತನ್ನ ಮಗ ಉತ್ತಮ ಶಸ್ತ್ರವೈದ್ಯನಾಗುವ ಸಾಧ್ಯತೆ ಕಂಡುಕೊಂಡಿದ್ದಳು. ಹದಿಮೂರನೆಯ ವರ್ಷದಲ್ಲಿ ಈತನಿಗೆ ವಿಶೇಷ ಪಾಠ ಕಲಿಸಲು ಖಾಸಗೀ ಉಪಾಧ್ಯಾಯನೊಬ್ಬನನ್ನು ಗೊತ್ತುಮಾಡಿದಳು. ರಕ್ತ ಕಂಡರೆ ಹೆದರುತ್ತಿದ್ದ ಈತ ಜನ ಕಾಯಿಲೆಯಿಂದ ನರಳುವುದನ್ನು ನೋಡಿ ಮನಸ್ಸಿನಲ್ಲಿ ಖೇದಗೊಂಡ. ವೈದ್ಯವಿಜ್ಞಾನದ ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿ ಸೂಕ್ಷ್ಮದರ್ಶಕೀಯ ಅಂಗರಚನಾಶಾಸ್ತ್ರದ ಪರಿಣತ ದೋನೆ ಎಂಬವನ ಸಂಪರ್ಕ ಉಂಟಾಯಿತು. ಮುಂದೆ ಬೆಳಕು ಮತ್ತು ಪ್ರಕಾಶವಿಜ್ಞಾನಗಳಲ್ಲಿ ಆಸಕ್ತಿ ತಳೆದ. ಉಪಕರಣಗಳನ್ನು ರೂಪಿಸುವಲ್ಲಿ ಈತನಿಗಿದ್ದ ಚಾತುರ್ಯ ಬಹಳಷ್ಟು ಸಾಧನಗಳನ್ನು ರಚಿಸುವುದಕ್ಕೆ ಎಡೆಮಾಡಿಕೊಟ್ಟಿತು.
	ಭೂಮಿಯ ಆವರ್ತನೆಯನ್ನು ನಿರೂಪಿಸುವಂಥ ಸರಳಲೋಲಕದ ಪ್ರಯೋಗ ಇವನಿಗೆ ಅಪಾರ ಖ್ಯಾತಿ ತಂದುಕೊಟ್ಟಿತು. ಈ ಲೋಲಕಕ್ಕೆ ಫೂಕೋ ಲೋಲಕ ಎಂದೇ ಹೆಸರು. ಭೂಮಿ ತನ್ನ ಅಕ್ಷದ ಸುತ್ತ ಆವರ್ತಿಸುವುದರ ಕಾರಣವಾಗಿ ಲೋಲಕದ ಆಂದೋಲನತಲ ಬದಲಾವಣೆಯಾದಂತೆ ಕಾಣುತ್ತದೆ. ಈ ಲೋಲಕವನ್ನು ಪ್ರಪಂಚದ ಅನೇಕ ವಸ್ತುಸಂಗ್ರಹಾಲಯಗಳಲ್ಲಿ ಪ್ರದರ್ಶನಕ್ಕೆ ಇಟ್ಟಿದೆ. ಲೋಲಕತಲದ ಆವರ್ತನೆಗೂ ಭೂಮಿಯ ಕೋನೀಯ ವೇಗ ಮತ್ತು ಪ್ರಯೋಗ ಸ್ಥಳದ ಅಕ್ಷಾಂಶಕ್ಕೂ ಸಂಬಂಧಿಸಿದಂತೆ ನಿಯಮವೊಂದನ್ನು ಪ್ರಕಾಶಪಡಿಸಿದ. 

	ಫೂಕೋ 1852ರಲ್ಲಿ ಜೈರೊಸ್ಕೊಪ್ ಎಂಬ ಹೆಸರಿನ ಪರಿಭ್ರಮಣಚಕ್ರವನ್ನು ರೂಪಿಸಿ ಅದರ ವಿವರಣೆಗಳನ್ನು ನೀಡಿದ. ಬಲುವೇಗದಿಂದ ಗಿರಕಿಸುವ ಚಕ್ರವೊಂದು eóÉೈರೊಸ್ಕೋಪ್ ಜಡತ್ವ (eóÉೈರೊಸ್ಕೋಪ್ ಇನರ್ಷಿಯ) ಎಂಬ ಪರಿಣಾಮಕ್ಕೆ ಅನುಗುಣವಾಗಿ, ಅದರ ಅಕ್ಷದ ದಿಶೆಯನ್ನು ಬದಲಾಯಿಸುವ ಯಾವುದೇ ಪ್ರಯತ್ನವನ್ನಾದರೂ ಪ್ರಬಲವಾಗಿ ವಿರೋಧಿಸುತ್ತದೆ. ಭೂಮಿ ಆವರ್ತಿಸುತ್ತಿರುವಾಗ ಆಕಾಶದಲ್ಲಿಯ ನಕ್ಷತ್ರಗಳನ್ನು ಕುರಿತಂತೆ, ಈ eóÉೈರೊಸ್ಕೋಪ್ ಯಂತ್ರ ತನ್ನ ದಿಶಾಕೋನವನ್ನು ಕಾಪಾಡಿಕೊಂಡು ಬರುತ್ತದೆ. ಉತ್ತರ ಮುಖಿಗೆ ಬದಲಾಗಿ ಈ ಯಂತ್ರವನ್ನು ಅಳವಡಿಸಿರುವ eóÉೈರೊಕಂಪಾಸ್ ಎಂಬ ಉಪಕರಣವನ್ನು ಜರ್ಮನಿಯ ಯುದ್ಧ ನಾವೆಯಲ್ಲಿ ಬಳಸಲಾಯಿತು (1910). ಇಂಥ eóÉೈರೊಕಂಪಾಸ್ ಉಪಕರಣವನ್ನು ಭೂ ಹಾಗೂ ಆಕಾಶನೌಕಾಯನಗಳಲ್ಲಿ ಬಳಸಿಕೊಳ್ಳುವುದಿದೆ

	ಫೂಕೋ ಭೌತ ಮತ್ತು ವೈದ್ಯವಿಜ್ಞಾನಗಳನ್ನು ಅಧ್ಯಯನ ಮಾಡಿದ ಮೇಲೆ ಪ್ಯಾರಿಸಿನ ವೇಧಶಾಲೆಯಲ್ಲಿ ಭೌತವಿಜ್ಞಾನಿಯಾಗಿ ಕೆಲಸಕ್ಕೆ ಸೇರಿ (1855) ಅಲ್ಲಿಯ ಜನರಿಗೆ ಬಹಳಷ್ಟು ನೆರವಾದ. ಬೆಳಕಿನ ವೇಗವನ್ನು ಸಾಕಪ್ಟು ನಿಖರತೆಯಿಂದ ಅಳೆದದ್ದು. ಈತನ ಮತ್ತೊಂದು ಸಾಧನೆ. ಇಲ್ಲಿ ಇದ್ದದ್ದು ಸುಮಾರು 20 ಮೀಟರುಗಳ ಅಂತರದಲ್ಲಿ ಇಡಲಾಗಿದ್ದು ಎರಡು ದರ್ಪಣಗಳು. ಒಂದು ಗಿರಗಿರನೆ ತಿರುಗುತ್ತಿತ್ತು. ಇದರ ಮೇಲೆ ಬಿದ್ದು ಪ್ರತಿಫಲನಗೊಂಡ ಬೆಳಕು ಮತ್ತೊಂದು ದರ್ಪಣದ ಮೇಲೆ ಬೀಳುವ ಏರ್ಪಾಡು ಇಲ್ಲಿಯದು. ಎರಡನೆಯ ದರ್ಪಣದಿಂದ ಪ್ರತಿಫಲಿತವಾಗಿ ಮತ್ತೆ ಮೊದಲಿನ ದರ್ಪಣದ ಮೇಲೆಯೇ ಬೆಳಕು ಬಂದು ಬೀಳುವಷ್ಟರಲ್ಲಿ ಅದು (ದರ್ಪಣ) ಕೊಂಚ ಆವರ್ತನೆಗೊಳ್ಳುತ್ತಿತ್ತು. ಇದರಿಂದ ಎರಡನೆಯ ಬಿಂಬ ಮೂಡುವುದು, ಒಂದನೆಯ ಹಾಗೂ ಎರಡನೆಯ ಬಿಂಬಗಳ ನಡುವೆ ಉಂಟಾದ ಸ್ಥಾನಪಲ್ಲಟ, ಇವು ಬೆಳಕಿನ ವೇಗವನ್ನು ಆಧರಿಸಿದ್ದುವು 1850-62ರ ಅವಧಿಯಲ್ಲಿ ಫೂಕೋ ನಡೆಸಿದ ಪ್ರಯೋಗಗಳ ಫಲವಾಗಿ ಬೆಳಕಿನ ವೇಗ, ವಾಯುಮಾಧ್ಯಮದಲ್ಲಿ 298.000 ಕಿಮೀ/ಸೆ ಎಂದು ತಿಳಿದುಬಂತು. ಎರಡು ದರ್ಪಣಗಳ ನಡುವೆ, ನೀರುತುಂಬಿದ ಕೊಳವೆಯನ್ನು ಇಟ್ಟು ಪ್ರಯೋಗವನ್ನು ಫೂಕೋ ಮುಂದುವರಿಸಿದಾಗ, ಫಲಿತವೇಗ ಮೊದಲಿನ ವೇಗದ 25% ರಷ್ಟು ಕಡಿಮೆಯಾಗಿತ್ತು. ಇದರಿಂದ ಬೆಳಕಿನ ವೇಗ ಅದು ಚಲಿಸುವ ಮಾಧ್ಯಮವನ್ನು ಆಧರಿಸಿದೆ ಎಂಬುದು ಸ್ಥಿರಪಟ್ಟಿತು.

	ನಿಮ್ನದರ್ಪಣಗಳ ಗುಣಮಟ್ಟ ಅಳೆಯುವಲ್ಲಿ ಫೂಕೋ ರೂಪಿಸಿದ ಪರೀಕ್ಷೆಗಳಿಂದಾಗಿ ಅವುಗಳಲ್ಲಿಯ ವೈಪರೀತ್ಯಗಳನ್ನು ಪತ್ತೆಮಾಡುವುದು ಸಾಧ್ಯವಾಯಿತು. ಈತ ರೂಪಿಸಿದ ಪರೀಕ್ಷೆ ಬಳಕೆಗೆ ಬರುವುದಕ್ಕೆ ಮುಂಚೆ ಖಗೋಳೀಯ ದೂರದರ್ಶಕಗಳ ಮಸೂರಗಳನ್ನು ಯುಕ್ತವಾಗಿ ಅರೆಯಲು ಸ್ಥೂಲ ಪ್ರಯತ್ನಗಳಾಗುತ್ತಿದ್ದುವು.

	ಪ್ಯಾರಿಸಿನ ಪ್ರಯೋಗಾಲಯದಲ್ಲಿರುವಾಗ್ಗೆ ತನಗೆ ಬರುವಂಥ ಹಣದಿಂದ ತನ್ನದೇ ಆದ ಪ್ರಯೋಗಾಲಯ ವನ್ನು ಸ್ಥಾಪಿಸಿಕೊಳ್ಳುವ ಅಭಿಲಾಷೆ ಹೊಂದಿದ್ದ. ಆದರೆ ಈತ ಕೈಗಾರಿಕೆಯನ್ನು ಅರಿತುಕೊಳ್ಳಬೇಕು ಎಂಬುದು ವಿಧಿತವಾಗಿತ್ತು. ಮರಗೆಲಸಗಳಿಗೆ ಹಾಗೂ ನೇಯ್ಗೆ ಯಂತ್ರಗಳಿಗೆ ಸಂಬಂಧಿಸಿದ ಪ್ರಯೋಗ ನಿರೂಪಣೆಗಳನ್ನು 1867ರಲ್ಲಿ ನಡೆದ ವಸ್ತುಪ್ರದರ್ಶನವೊಂದರಲ್ಲಿ ಈತ ಮಾಡುತ್ತಿದ್ದ ಈ ಪ್ರಯತ್ನಗಳು ಇವನಿಗೆ ಹಣದೊರಕಿಸಿಕೊಟ್ಟುವಾದರೂ ಆರೋಗ್ಯವನ್ನು ಹಾಳುಮಾಡಿದುವು. 1867ರಲ್ಲಿ ಕಾಣಿಸಿಕೊಂಡ ಪಾಶ್ರ್ವವಾಯು ಕಾಯಿಲೆಯಿಂದ ಈತ 1868 ಫೆಬ್ರವರಿ 11 ರಂದು ಪ್ಯಾರಿಸಿನಲ್ಲಿ ಮೃತನಾದ.
(ಐ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ